ನೀನಿಲ್ಲದೇ
ನಗೆ ಅಮೃತವ ಚೆಲ್ಲಿ ತಂಪಾದ ತಂಗಾಳಿಯಂತಿದ್ದ
ನೀನಿಲ್ಲದೆ ಈ ಹೃದಯವು ಈಗ ಖಾಲಿ ಖಾಲಿ
ಆಕಾಶದ ಹಾಳೆಯ ಮೇಲೆ ನಾವಿಬ್ಬರು ಬರೆದ
ಕನಸುಗಳು ಕರಗಿ ಆಕಾಶವು ಈಗ ಖಾಲಿ ಖಾಲಿ
ಹಕ್ಕಿ ಪಕ್ಷಿಗಳ ಗೂಡೊಳಗೆ ನಾವಿಬ್ಬರೂ ಅವಿತಿದ್ದ
ಬೆಚ್ಚನೆಯ ಅರಮನೆಯು ಈಗ ಖಾಲಿ ಖಾಲಿ
ಹರಿಯುವ ನದಿಯ ನೀರ ಮೆಲೆ ನಾವಿಬ್ಬರೂ
ಹರಿಬಿಟ್ಟ ದೋಣಿ ಇಲ್ಲದೆ ನದಿ ಈಗ ಖಾಲಿ ಖಾಲಿ
ಆಮರದ ಮಡಿಲೊಳಗೆ ಅವಿತು ಕುಳಿತ ನಮ್ಮಿಬ್ಬರ
ಪಿಸಿಮಾತು ಕೇಳಿದ್ದ ತಂಗಾಳಿಯು ಈಗ ಖಾಲಿ ಖಾಲಿ
ನಿನ್ನ ಹಾಡಿಗೆ ಮರುಳಾಗಿ ಹಾಡಿ ನಲಿದಿದ್ದ ಮೃಗ
ಖಗಗಳಿಲ್ಲದೆ ಸುಂದರ ವನವೀಗ ಖಾಲಿ ಖಾಲಿ
ಚಂದ್ರನ ಬೆಳಕಿಗೆ ನಿನ್ನಂದದಿ ಹೊಳಪು ತಂದಿದ್ದ
ನೀನಿಲ್ಲದೆ ಈ ಇರುಳು ಈಗ ಖಾಲಿ ಖಾಲಿ
ಬದುಕಿನ ಪುಟಗಳಲ್ಲಿ ನಿನ್ನ ಹಸ್ತಾಕ್ಷರದ ಬರಹ
ಇಲ್ಲದೆ ಈ ಬದುಕು ಈಗ ಖಾಲಿ ಖಾಲಿ
ಜೀವನದ ಜೋಕಾಲಿಯಲಿ ನಿನ್ನ ಹಾಜರಿ ಇಲ್ಲದೆ
ಜೀಕದೇ ನಿಂತ ಜೋಕಾಲಿ ಈಗ ಖಾಲಿ ಖಾಲಿ
ನೀನಿಲ್ಲದಿದ್ದರೂ ನಿನ್ನ ಪ್ರೀತಿಯ ನೆನಪುಗಳಿಲ್ಲದೇ
"ಚಾಗಿ" ಯ ಮನದ ಮೌನವೂ ಈಗ ಖಾಲಿ ಖಾಲಿ ||
=> ವೆಂಕಟೇಶ ಚಾಗಿ