**ಗಜ಼ಲ್**
ಸೂರ್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಃಖಿಸಲಿ
ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಃಖಿಸಲಿ
ನಕ್ಷತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು
ಕತ್ತಲೆಯಲ್ಲೂ ಮಂದ ಬೆಳಕೊಂದು ಜಗವ ಬೆಳಗುವಾಗ ನಾನೇಕೆ ದುಃಖಿಸಲಿ
ನಿನ್ನ ಮನದ ಸುಖಸಂತೋಷಗಳಿಗೆ ನನ್ನ ಕನಸುಗಳು ಖಾಲಿಯಾಗಿರಬಹುದು
ಸಮಯವಿನ್ನು ಹಸಿರಾಗಿಸಿ ನನ್ನ ನಗಿಸುತಿರುವಾಗ ನಾನೇಕೆ ದುಃಖಿಸಲಿ
ಹೃದಯದೊಳಗಿನ ಸಾಮ್ರಾಜ್ಯದ ಹೂವುಗಳು ಬಾಡಿ ಕಸವಾಗಿರಬಹುದು
ಹೃದಯಬಡಿತವಿನ್ನೂ ಬದುಕ ಬದುಕಿಸಲು ಹೆಣಗುವಾಗ ನಾನೇಕೆ ದುಃಖಿಸಲಿ
ನಿನ್ನ ನೆನಪುಗಳು ಪ್ರತಿಕ್ಷಣವೂ ದೇಹವನು ಚುಚ್ಚಿಕೊಲ್ಲಬಹುದು
"ಚಾಗಿ"ಯ ನುಡಿಗಳಿಂದು ಹೊಸ ಶಕ್ತಿ ತುಂಬುವಾಗ ನಾನೇಕೆ ದುಃಖಿಸಲಿ||
=> ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ