ಭಾನುವಾರ, ಮಾರ್ಚ್ 30, 2025

ನೀನೇ ಕಾಣಿಸುತ್ತಿಲ್ಲ | ಗಜಲ್ | ವೆಂಕಟೇಶ ಚಾಗಿ | neene kanisuttilla | gajal | venkatesh chagi



 ಗಜಲ್

ಬೆಟ್ಟಗಳ ಕೊರೆದು ಹುಟ್ಟುವ ಹಸಿರನು ಕಾಡದಿರು ಮನುಜ
ಕಸಕಡ್ಡಿಗಳ ಗೂಡುಗಳನು ಸುಟ್ಟು ಹಕ್ಕಿಗಳನು ಕಾಡದಿರು ಮನುಜ

ಉಸಿರಿಗೆ ವಿಷವ ಸುರಿದರೂ ನಿನ್ನಾಸೆಯು ನಾಶವಾಗಲಿಲ್ಲ
ಬದುಕ ಕಟ್ಟಿ ಬದುಕುತಿರುವ ಕೋಟ್ಯನು ಜೀವಿಗಳನು ಕಾಡದಿರು ಮನುಜ

ಕಾಣದಿರುವ ಸ್ವರ್ಗವು ಧರೆಯ ಮೇಲೆ ಕಣ್ಕುಕ್ಕುವಂತೆ ಹರಡಿದೆ
ನಿಂತ ನೆಲೆಯ ನರಕವಾಗಿಸಿ ಮಿಡಿವ ಹೃದಯಗಳನು ಕಾಡದಿರು ಮನುಜ

ಮೇಘದಿಂದ ಉದುರಿದ ಅಮೃತವು ಶರಧಿಯೆಡೆಗೆ ಸಾಗಿದೆ
ಸಾಗುವ ದಾರಿಗೆ ಮನೆಕಟ್ಟಿ ಗಂಗೆಯನು ಕಾಡದಿರು ಮನುಜ

ಜಗದ ಒಳಿತಿಗೆ ದುಡಿಯುವವರು ಬದುಕಿಹರು ಜಗದಲ್ಲಿ
ಚಾಗಿಯ ಹಿತನುಡಿಗಳನು ಅರಿತು ಜಗವ ಕಾಡದಿರು ಮನುಜ

=> ವೆಂಕಟೇಶ ಚಾಗಿ




ಬುಧವಾರ, ಮಾರ್ಚ್ 26, 2025

ನಕ್ಕುಬಿಡು | ಗಜಲ್ | ವೆಂಕಟೇಶ ಚಾಗಿ | nakkubidu | gajal | venkatesh chagi

 

ಗಜಲ್


ಮನಸು  ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು
ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು

 ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು 
ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು ಬಿಡು

 ಬಂಗಾರಕ್ಕೂ ನಿಲುಕುದ ಸುಂದರ ಒಡವೆ ನೀನು 
ವೈಯಾರದ ಶೃಂಗಾರವು ಮಿನುಗುತಿದೆ ಒಮ್ಮೆ ನಕ್ಕು ಬಿಡು

 ಕಲ್ಪನೆಯ ಹೂದೋಟದಿ ಅರಳಿರುವ ಪುಷ್ಪ ನೀನು 
ದುಂಬಿಯು ಮಧು ಹೀರುತಿದೆ ಒಮ್ಮೆ ನಕ್ಕು ಬಿಡು 

ಏಕಾಂತದ ಸಮಯದಲಿ ಈ ಕವಿ'ಯ ಸಂಗಾತಿ ನೀನು 
ಕವನವೊಂದು ಮೂಡಿಬರುತ್ತಿದೆ ಒಮ್ಮೆ ನಕ್ಕು ಬಿಡು


ಮಂಗಳವಾರ, ಮಾರ್ಚ್ 25, 2025

ನೆನಪುಗಳ ಬುತ್ತಿ | ಗಜಲ್ | ವೆಂಕಟೇಶ ಚಾಗಿ | nenapugala butti | gajal | venkatesh chagi

 **ಗಜಲ್**


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ ಸಖಿ
ನನಸಾಗದೇ ಉಳಿದ ಕನಸುಗಳ ಸವಿಯ ಮೆಲುಕು ಹಾಕುತಿರುವೆ ಸಖಿ

ಕರಗಿ ಹೋದ ಸಮಯ ಶೇಷವನ್ನೇನೋ ಉಳಿಸಿ ಹೋಗಿದೆ
ಅಳಿದುಳಿದ ಹೆಜ್ಜೆ ಗುರುತುಗಳ ಹೊಳಪ ಮೆಲುಕು ಹಾಕುತಿರುವೆ ಸಖಿ

ನಾವಾಡಿದ ಮಾತುಗಳು ಗಾಳಿಯಲಿ ಕರಗದೆ ಮತ್ತೆ  ರಿಂಗಣಿಸಿವೆ
ಮುತ್ತು ತಂದ ಆ ಮಾತುಗಳ ಘಮವನು ಮೆಲುಕು ಹಾಕುತಿರುವೆ ಸಖಿ

ಮೇಘ ನುಡಿದ ರಾಗ ಅಂದಿನಂತೆ ಈಗಲೂ ಹಸಿರಾಗಿ ಕೇಳುತಿದೆ
ನಿನ್ನ ಹೃದಯ ಬಡಿತದ ತಾಳಕ್ಕೆ ನನ್ನುಸಿರ ರಾಗವನು ಮೆಲುಕು ಹಾಕುತಿರುವೆ ಸಖಿ

ವೆಂಕು ಎಂದು ಕರೆದ ನಿನ್ನ ಧ್ವನಿಗೆ ಈಗಲೂ ಹೂಗಳು ಅರಳುತಿವೆ
ನೀನು ನೀಡಿದ ಪ್ರೀತಿ ಅಮೃತದ ರುಚಿಯ ಮೆಲುಕು ಹಾಕುತಿರುವೆ ಸಖಿ

=> ವೆಂಕಟೇಶ ಚಾಗಿ



ಭಾನುವಾರ, ಮಾರ್ಚ್ 23, 2025

ಸ್ವಾಗತ | ಗಜಲ್ | ವೆಂಕಟೇಶ ಚಾಗಿ | swagata | gajal | venkatesh chagi

 

ಗಜಲ್

**ಸ್ವಾಗತ **

ನನ್ನ ಹೃದಯದೊಳಗೆ ಪ್ರವೇಶಿಸುತ್ತಿರುವ ನಿನಗೆ ಸ್ವಾಗತ 
ನನ್ನ ಕನಸುಗಳಿಗೆ ಜೀವ ನೀಡುತ್ತಿರುವ ನಿನಗೆ ಸ್ವಾಗತ

ಹೊಸ ಕಥೆಯೊಂದು ಆರಂಭವಾಗಿದೆ ನನ್ನ ಬದುಕಿನಲ್ಲಿ 
ನನ್ನ ಜೀವನದ ಜೀವವಾಗುತ್ತಿರುವ ನಿನಗೆ ಸ್ವಾಗತ 

ಅಂತರಂಗದ ಅನುಪಯುಕ್ತ ಮಾತುಗಳೆಲ್ಲ ದೂರವಾಗಿವೆ
ನನ್ನ ಭವಿಷ್ಯದ ಬೆಳಕಾಗುತ್ತಿರುವ ನಿನಗೆ ಸ್ವಾಗತ

ಆಸೆ ನಿರಾಶೆಗಳ ಅಲೆಗಳೆಲ್ಲ ಈಗ ಶಾಂತವಾಗಿವೆ
ನನ್ನ ನೆಮ್ಮದಿಯ ಜ್ಯೋತಿ ಆಗುತ್ತಿರುವ ನಿನಗೆ ಸ್ವಾಗತ 

ಯಾರ ಕೆಡಕಿಗೂ ಕಾರಣನಾಗಲಾರನಿವ  ಚಾಗಿ 
ನನ್ನ ಒಳಿತಿನ ಬಂಗಾರವಾಗುತ್ತಿರುವ ನಿನಗೆ ಸ್ವಾಗತ 

✍️ ವೆಂಕಟೇಶ ಚಾಗಿ