ಶುಕ್ರವಾರ, ಆಗಸ್ಟ್ 29, 2025

ನೀನಿಲ್ಲದೇ | ಗಜಲ್ | ವೆಂಕಟೇಶ ಚಾಗಿ | neenillade | gajal | venkatesh chagi

 ನೀನಿಲ್ಲದೇ


ನಗೆ  ಅಮೃತವ ಚೆಲ್ಲಿ ತಂಪಾದ ತಂಗಾಳಿಯಂತಿದ್ದ
ನೀನಿಲ್ಲದೆ ಈ ಹೃದಯವು ಈಗ ಖಾಲಿ ಖಾಲಿ
ಆಕಾಶದ ಹಾಳೆಯ ಮೇಲೆ ನಾವಿಬ್ಬರು ಬರೆದ
ಕನಸುಗಳು ಕರಗಿ ಆಕಾಶವು ಈಗ ಖಾಲಿ ಖಾಲಿ

ಹಕ್ಕಿ ಪಕ್ಷಿಗಳ ಗೂಡೊಳಗೆ ನಾವಿಬ್ಬರೂ ಅವಿತಿದ್ದ
ಬೆಚ್ಚನೆಯ ಅರಮನೆಯು ಈಗ ಖಾಲಿ ಖಾಲಿ
ಹರಿಯುವ ನದಿಯ ನೀರ ಮೆಲೆ ನಾವಿಬ್ಬರೂ
ಹರಿಬಿಟ್ಟ ದೋಣಿ ಇಲ್ಲದೆ ನದಿ ಈಗ ಖಾಲಿ ಖಾಲಿ

ಆಮರದ ಮಡಿಲೊಳಗೆ ಅವಿತು ಕುಳಿತ ನಮ್ಮಿಬ್ಬರ
ಪಿಸಿಮಾತು ಕೇಳಿದ್ದ ತಂಗಾಳಿಯು ಈಗ ಖಾಲಿ ಖಾಲಿ
ನಿನ್ನ ಹಾಡಿಗೆ ಮರುಳಾಗಿ ಹಾಡಿ ನಲಿದಿದ್ದ ಮೃಗ
ಖಗಗಳಿಲ್ಲದೆ ಸುಂದರ ವನವೀಗ  ಖಾಲಿ ಖಾಲಿ

ಚಂದ್ರನ ಬೆಳಕಿಗೆ ನಿನ್ನಂದದಿ ಹೊಳಪು ತಂದಿದ್ದ
ನೀನಿಲ್ಲದೆ ಈ ಇರುಳು ಈಗ ಖಾಲಿ ಖಾಲಿ
ಬದುಕಿನ ಪುಟಗಳಲ್ಲಿ ನಿನ್ನ ಹಸ್ತಾಕ್ಷರದ ಬರಹ
ಇಲ್ಲದೆ ಈ ಬದುಕು ಈಗ ಖಾಲಿ ಖಾಲಿ

ಜೀವನದ ಜೋಕಾಲಿಯಲಿ ನಿನ್ನ ಹಾಜರಿ ಇಲ್ಲದೆ
ಜೀಕದೇ ನಿಂತ ಜೋಕಾಲಿ ಈಗ ಖಾಲಿ ಖಾಲಿ
ನೀನಿಲ್ಲದಿದ್ದರೂ ನಿನ್ನ ಪ್ರೀತಿಯ ನೆನಪುಗಳಿಲ್ಲದೇ
"ಚಾಗಿ" ಯ ಮನದ ಮೌನವೂ ಈಗ ಖಾಲಿ ಖಾಲಿ ||

=> ವೆಂಕಟೇಶ ಚಾಗಿ




ಗುರುವಾರ, ಆಗಸ್ಟ್ 28, 2025

ನಾನೇಕೆ ದುಃಖಿಸಲಿ | ಗಜಲ್ | ವೆಂಕಟೇಶ ಚಾಗಿ | naaneke dukhisali | gajal | venkatesh chagi

 

**ಗಜ಼ಲ್**

ಸೂರ್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಃಖಿಸಲಿ
ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಃಖಿಸಲಿ

ನಕ್ಷತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು
ಕತ್ತಲೆಯಲ್ಲೂ ಮಂದ ಬೆಳಕೊಂದು ಜಗವ ಬೆಳಗುವಾಗ ನಾನೇಕೆ ದುಃಖಿಸಲಿ

ನಿನ್ನ ಮನದ ಸುಖಸಂತೋಷಗಳಿಗೆ ನನ್ನ ಕನಸುಗಳು ಖಾಲಿಯಾಗಿರಬಹುದು
ಸಮಯವಿನ್ನು ಹಸಿರಾಗಿಸಿ ನನ್ನ ನಗಿಸುತಿರುವಾಗ ನಾನೇಕೆ ದುಃಖಿಸಲಿ

ಹೃದಯದೊಳಗಿನ ಸಾಮ್ರಾಜ್ಯದ ಹೂವುಗಳು ಬಾಡಿ ಕಸವಾಗಿರಬಹುದು
ಹೃದಯಬಡಿತವಿನ್ನೂ ಬದುಕ ಬದುಕಿಸಲು ಹೆಣಗುವಾಗ ನಾನೇಕೆ ದುಃಖಿಸಲಿ

ನಿನ್ನ ನೆನಪುಗಳು ಪ್ರತಿಕ್ಷಣವೂ ದೇಹವನು ಚುಚ್ಚಿಕೊಲ್ಲಬಹುದು
"ಚಾಗಿ"ಯ ನುಡಿಗಳಿಂದು ಹೊಸ ಶಕ್ತಿ ತುಂಬುವಾಗ ನಾನೇಕೆ ದುಃಖಿಸಲಿ||

=> ವೆಂಕಟೇಶ ಚಾಗಿ